ತುಳುಚಿತ್ರ ರಂಗದ ಇತಿಹಾಸದಲ್ಲಿ ಮೊದಲ ಹಾಡು ಬರೆದ ಬಿ. ಭೋಜ ಸುವರ್ಣ ಅವರು ಐಲೇಸಾದ ಪ್ರತಿಷ್ಠಿತ ''ವಯೋ ಸಮ್ಮಾನ್ -2024'' ಪುರಸ್ಕಾರಕ್ಕೆ ಆಯ್ಕೆ.
ತುಳುಚಿತ್ರ ರಂಗದ ಇತಿಹಾಸದಲ್ಲಿ ಮೊದಲ ಹಾಡು ಬರೆದ ಬಿ. ಭೋಜ ಸುವರ್ಣ ಅವರು ಐಲೇಸಾದ ಪ್ರತಿಷ್ಠಿತ ''ವಯೋ ಸಮ್ಮಾನ್ -2024'' ಪುರಸ್ಕಾರಕ್ಕೆ ಆಯ್ಕೆ.
================================
ಐಲೇಸಾ - ದಿ ವಾಯ್ಸ್ ಆಫ್ ಓಷನ್ (ರಿ) ಪ್ರತೀ ವರ್ಷ ಕಲೆ ಸಂಸ್ಕೃತಿ ಸಾಹಿತ್ಯ ವಿಭಾಗದಲ್ಲಿ ಎಲೆಮರೆಯ ಹಿರಿಯ ಸಾಧಕರನ್ನು ಗುರುತಿಸಿ ಪುರಸ್ಕರಿಸುವ ''ವಯೋ ಸಮ್ಮಾನ'' ಗೌರವಕ್ಕೆ ತುಳು ಚಿತ್ರ ರಂಗದ ಮೊದಲ ಚಿತ್ರ ''ಎನ್ನ ತಂಗಡಿ'' ಸಿನಿಮಾದ ಗೀತೆ ರಚನೆಕಾರ ಬೊಕ್ಕ ಪಟ್ಣ ಭೋಜ ಸುವರ್ಣ ಇವರನ್ನು ಆಯ್ಕೆ ಮಾಡಿದೆ .
85 ವರ್ಷ ವಯಸ್ಸಿನ ಭೋಜ ಸುವರ್ಣ 4 ತುಳು ಸಿನಿಮಾಗಳಿಗೆ ಹತ್ತು ಹಾಡುಗಳನ್ನು ರಚನೆ ಮಾಡಿದ್ದು ಅವುಗಳಲ್ಲಿ ''ಯಾನ್ ಸನ್ಯಾಸಿ ಆಪೆ'' ಚಿತ್ರದ 'ಇಂಪು ತಂಪು ಜಾಗೆ ಉಂದು ಸ್ವರ್ಗಯಾ' , 'ಓ ಡಾರಿ ಡೀರಿ ಡೆನ್ನಾ' , 'ರಾಧಾ ರಾಧಾ ಒಡೆ ಪೋಪ ಎನನ್ ಬುಡ್ದು ಸೀದಾ , '
'' ಸಾವಿರೊಡೊರ್ತಿ ಸಾವಿತ್ರಿ'' ಚಿತ್ರದ
'ಇರೆ ಪ್ರೀತಿದಾ ದಿನ ಕಾತೆ ', 'ರಾಜ ರಾಜ ಮಹಾರಾಜಾ', 'ಕಣ್ಣಿತ್ತ್ ದ್ ಕೈಯಿತ್ತ್ ದ್ ಕಲ್ಲಾಯನ' ಹಾಗೂ ''ಕಾಸದಾಯೆ ಕಂಡನೆ'' ಚಿತ್ರದ 'ಈ ಜಗತೇ ಜಗದೀಶನ' , 'ಕಣ್ಣ್ ಕಟ್ಟುದ ಕತೆನೀ ಬುಡ್ಲಾ' ಚಿತ್ರ ಗೀತೆಗಳು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿವೆ .
19 ಫೆಬ್ರವರಿ 1971 ರಲ್ಲಿ ಮಂಗಳೂರು ಸೆಂಟ್ರಲ್ ಚಿತ್ರ ಮಂದಿರದಲ್ಲಿ ಬಿಡುಗಡೆಯಾದ ತುಳುವಿನ ಮೊದಲ ಚಿತ್ರ ಹೆಗ್ಗಳಿಕೆಯ 'ಎನ್ನ ತಂಗಡಿ'ಯ ಎರಡು ಹಾಡುಗಳಲ್ಲಿ ಇವರು ಬರೆದ ''ಮನಸ್ ನ್ ನಿರ್ಮಲ ದೀದ್ ಬದುಕುಂಡ ಅವ್ವೆ ಒಂಜಿ ಮಂದಿರಾ'' ತಾಂತ್ರಿಕ ಕಾರಣಗಳಿಂದ ಇಂದು ಲಭ್ಯವಿಲ್ಲ. ಚಿತ್ರದ ಎರಡು ಹಾಡುಗಳಲ್ಲಿ ಮತ್ತೊಂದನ್ನು ಬನ್ನಂಜೆ ಗೋವಿಂದ ಆಚಾರ್ಯರು ಬರೆದಿದ್ದರು.
ಬಡತನದ ನಡುವೆಯೂ , ಗ್ಯಾರೇಜಿನಲ್ಲಿ ದುಡಿಯುತ್ತಾ ತನ್ನ ಹದಿನೆಂಟನೆ ವರ್ಷದಿಂದ ಆರಂಭಿಸಿ ನಾಟಕ ಮತ್ತು ಚಲನ ಚಿತ್ರಗಳಿಗೆ ಸುಮಾರು ಮೂರು ಸಾವಿರ ಹಾಡುಗಳನ್ನು ಬರೆದಿರುವ ಭೋಜ ಸುವರ್ಣ ಅವರು 24 ನಾಟಕಗಳನ್ನು ಬರೆದು , ನಿರ್ದೇಶಿಸಿ , ಅಭಿನಯಿಸಿ ಕಲಾಸೇವೆ ಮಾಡಿದವರು. ಎಂಬತ್ತೈದು ವರ್ಷದ ಇಳಿ ವಯಸ್ಸಿನಲ್ಲಿ ಇಂದಿಗೂ ಬೊಕ್ಕ ಪಟ್ಣದ ವಿಠೋಭ ಭಜನಾ ಮಂದಿರದಲ್ಲಿ ಮಕ್ಕಳಿಗೆ ಭಜನೆ ಕಲಿಸುವ ಮೂಲಕ ತಾನು ಅತ್ಯಂತ ಪ್ರೀತಿಸುವ ಕಲಾದೇವಿಯ ಆರಾಧನೆಯನ್ನು ಮಾಡುತ್ತಾ ಅಮಿತ ಜೀವನೋತ್ಸಾಹವನ್ನು ತೋರಿ ಆದರ್ಶರಾದವರು.
ಐಲೇಸಾ ತನ್ನ ಜನ್ಮ ಸಂಭ್ರಮದ ನಾಲ್ಕನೇ ವರ್ಷದ ಪ್ರಯುಕ್ತ ನೀಡಲಾಗುವ ''ವಯೋಸಮ್ಮಾನ'' ಪುರಸ್ಕಾರ ಪ್ರದಾನವು ಸಾಧಕರ ವಯಸ್ಸಿನಷ್ಟೇ ಅಂದರೆ ಎಂಬತ್ತೈದು ಸಾವಿರ ನಗದು ಮತ್ತು ಸಾಧಕರು ಅತ್ಯಂತ ಇಷ್ಟಪಡುವ ಗಾಯನ , ಭಜನೆ , ಅಭಿನಯ ತುಣುಕುಗಳ ಜೊತೆಗೆ ಅವರು ಪ್ರೀತಿಸುವ ಉಡುಗೊರೆಗಳೊಂದಿಗೆ ನಡೆಯಲಿದೆ.
ಈ ಸರಳ ಸಮಾರಂಭದಲ್ಲಿ ಅಬುದಾಬಿಯ ಸರ್ವೋತ್ತಮ ಶೆಟ್ಟಿ , ಕತಾರಿನ ಮೂಡಂಬೈಲು ರವಿ ಶೆಟ್ಟಿ , ಸೌದಿ ಅರೇಬಿಯಾದ ನರೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಭೋಜ ಸುವರ್ಣರ ಜೊತೆಯಲ್ಲಿ ದುಡಿದ ಸಂಗೀತ ನಿರ್ದೇಶಕ ಅಶೋಕ್ ಚರಣ್ , ನಟಿ ಸರೋಜಿನಿ ಶೆಟ್ಟಿ , ಸಂಗೀತ ನಿರ್ದೇಶಕ ವಿ. ಮನೋಹರ್ , ಗಾಯಕ ರಮೇಶ್ಚಂದ್ರ ವಿಶೇಷ ಅತಿಥಿಗಳಾಗಿ ಬಿ ಭೋಜ ಸುವರ್ಣ ಅವರಿಗೆ ಶುಭ ಕೋರಲಿದ್ದಾರೆ.
ಕಾರ್ಯಕ್ರಮ ಡಿಸೇಂಬರ್ ತಿಂಗಳ 21ರ ಶನಿವಾರ ಸಂಜೆ ಮೂರು ಗಂಟೆಯಿಂದ ಏಳು ಗಂಟೆಯವರೆಗೆ ಮಂಗಳೂರು ಪಾಂಡೇಶ್ವರದ ನಾಸಿಕ್ ಬಿ ಹೆಚ್ ಬಂಗೇರ ಸಭಾ ಭವನದ ನಾರ್ಣಪ್ಪ ಕಲಾಮಂಟಪ ಇಲ್ಲಿ ನಡೆಯಲಿದ್ದು ಐಲೇಸಾದ ಖ್ಯಾತ ಗಾಯಕರು ಬಿ ಭೋಜ ಸುವರ್ಣ ಅವರ ಮತ್ತು ಐಲೇಸಾದ ತುಳು ಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭೋಜ ಸುವರ್ಣ ಅಭಿಮಾನಿಗಳೆಲ್ಲರೂ ಭಾಗವಹಿಸಬೇಕೆಂದು ಐಲೇಸಾ ಸಂಸ್ಥೆಯ ಮುಂಬೈ ಮಾಧ್ಯಮ ಸಂಚಾಲಕ ಸೂರಿ ಮಾರ್ನಾಡು ತಿಳಿಸಿದ್ದಾರೆ.
------------------------------------------------------------
ವಯೋಸಮ್ಮಾನ ದೇವರ ಕೃಪೆ : ಭೋಜ ಸುವರ್ಣ
----------------------------------------------
''ನಾನು ಯಾವುದನ್ನೂ ಅಪೇಕ್ಷೆ ಪಟ್ಟು ಕಲಾದೇವಿಯ ಸೇವೆ ಮಾಡಿಲ್ಲ , ಆದರೆ ಸಮಾಜ ಕಲಾವಿದನ ಸುಖ ದುಃಖಗಳಿಗೆ ಸ್ಪಂದಿಸಬೇಕು ಎನ್ನುವ ಆಸೆ ಇತ್ತು . ಅಲ್ಲಲ್ಲಿ ಕೆಲವು ಹಿತೈಷಿ ಸಂಘ ಗಳಿಂದ ಮತ್ತು ತುಳು ಅಕಾಡಮಿಯ ಗೌರವ ಬಿಟ್ಟು ಸರಕಾರದ ವತಿಯಿಂದ ಯಾವ ಗುರುತಿಸುವಿಕೆಯೂ ನನ್ನ ಪಾಲಿಗೆ ಒದಗಿಲ್ಲ. ಈ ಎಲ್ಲಾ ಕೊರತೆಗಳನ್ನು ಐಲೇಸಾ ಸಂಸ್ಥೆ ಈಗ ನೀಗಿಸಿದೆ . ದೇವರಿಗೆ ಯಾವುದನ್ನು ಯಾವಾಗ ಕೊಡಬೇಕು ಎನ್ನುವುದು ಗೊತ್ತಿದೆ . ಸುಮಾರು ಅರುವತ್ತು ವರ್ಷಗಳಿಂದ ನಾನು ಆರಾಧಿಸುತ್ತಾ ಬಂದ ನನ್ನ ಆರಾಧ್ಯದೇವಿ ಸರಸ್ವತಿಗೆ ಸಂದ ಗೌರವ ಇದು. ಇಲ್ಲಾಂದ್ರೆ ಎಂಟನೆ ಕ್ಲಾಸ್ ಓದಿದವನಿಗೆ ಇಂತಹ ಪುರಸ್ಕಾರ ಸಿಗುವುದು ಸಾಧ್ಯವೇ? , ಇದೆಲ್ಲಾ ದೇವರ ಕೃಪೆ . ಯಾವುದನ್ನೂ ಇಚ್ಛಿಸದೆ ಸದಾ ನನ್ನ ಚಟುವಟಿಕೆಗಳಿಗೆ ಬೆಂಗಾವಲಾದ ನನ್ನ ಪತ್ನಿ ಹರಿಣಾಕ್ಷಿಗೆ ಈ ಪುರಸ್ಕಾರವನ್ನು ಸಮರ್ಪಿಸುತ್ತೇನೆ'' ಎಂದು ಭೋಜ ಸುವರ್ಣ ಭಾವುಕರಾಗುತ್ತಾರೆ.
ಇಂದಿಗೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ ಯೋಚಿಸದೆ ಸದಾ ಸಂಗೀತ ಚಟುವಟಿಕೆಯಿಂದ ಸಂತೋಷ ಪಡುತ್ತಿರುವ ಭೋಜ ಸುವರ್ಣರನ್ನು ಐಲೇಸಾ ಬೆಂಗಳೂರಿಗೆ ಕರೆಸಿ , ವಿ ಮನೋಹರ್ ಸಲಹೆಯಂತೆ ಅವರ ಮೊದಲ ಹಾಡನ್ನು ಅವರಿಂದಲೇ ಹಾಡಿಸಿ ಅವರಿಗೆ ವಿಶೇಷ ಉಡುಗೊರೆಯಾಗಿ ಕೊಟ್ಟಿದೆ .
Comments
Post a Comment